ಉಡುಪಿ ಯಲ್ಲಿ ಪರ್ಯಾಯ ಪೂರ್ವಭಾವಿ ಸಭೆ

ಉಡುಪಿ ಯಲ್ಲಿ ಪರ್ಯಾಯ ಪೂರ್ವಭಾವಿ ಸಭೆ

ಉಡುಪಿ ಪೇಜಾವರ ಮಠದ ಹಾಲ್‍ನಲ್ಲಿ ಮಂಗಳವಾರ ಸಮಾಲೋಚನಾ ಸಭೆ ನಡೆಯಿತು.

ತಾ: 17-10-2015,

ಪೇಜಾವರ ಪಂಚಮ ಪರ್ಯಾಯೋತ್ಸವಕ್ಕೆ ಇನ್ನು ಎರಡು ತಿಂಗಳು ಬಾಕಿ ಉಳಿದಿರುವಂತೆ ಸ್ವಾಗತ ಸಮಿತಿ ಭರದ ಸಿದ್ಧತೆಯಲ್ಲಿ ತೊಡಗಿದೆ. ಈ ಸಂಬಂಧ ಉಡುಪಿ ನಗರಸಭಾ ವ್ಯಾಪ್ತಿ ಮತ್ತು ಆಸುಪಾಸಿನ ಅಂಬಲಪಾಡಿ, ಕಡೆಕಾರ್ ಕಿದಿಯೂರು, ಕಲ್ಯಾಣಪುರ, ತೆಂಕನಿಡಿಯೂರು, ಬಡಾನಿಡಿಯೂರು, ಅಲೆವೂರು ಭಾಗದ ನಾಗರಿಕರು, ಭಕ್ತರ ಸಮಾಲೋಚನಾ ಸಭೆಯು ನಗರದ ಸಭಾಧ್ಯಕ್ಷ ಪಿ.ಯುವರಾಜ್ ಅಧ್ಯಕ್ಷತೆಯಲ್ಲಿ ಹಾಗು ಅನೇಕ ಜನಪ್ರತಿನಿಧಿಗಳು, ನಾಗರಿಕ ಪ್ರಮುಖರ ಉಪಸ್ಥಿತಿಯಲ್ಲಿ ಮಂಗಳವಾರ ಪೇಜಾವರ ಮಠದ ಸಭಾಂಗಣದಲ್ಲಿ ನಡೆಯಿತು.
ಪರ್ಯಾಯ ಸಮಿತಿ ಕಾರ್ಯಾಧ್ಯಕ್ಷರುಗಳಾದ ರಾಘವೇಂದ್ರ ಆಚಾರ್ಯ, ಭುವನೇಂದ್ರ ಕಿದಿಯೂರು, ಪ್ರಧಾನ ಕಾರ್ಯದರ್ಶಿಗಳಾದ ಹೆರಂಜೆ ಕೃಷ್ಣ ಭಟ್, ರತ್ನಕುಮಾರ್, ಕಬಿಯಾಡಿ ಜಯರಾಮಾಚಾರ್ಯ, ಮಠದ ದಿವಾನ ರಘುರಾಮಾಚಾರ್ಯ ಸಂಘಟನಾ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಎಸ್ ವಿ ಭಟ್ ಕೋಶಾಧಿಕಾರಿ ಪದ್ಮನಾಭ ಭಟ್, ಹೊರೆಕಾಣಿಕೆ ಸಮಿತಿ ಸಂಚಾಲಕ ಯಶ್ಪಾಲ್ ಸುವರ್ಣ, ಧ.ಗ್ರಾ.ಯೋಜನೆಯ ಜಿಲ್ಲಾ ಯೋಜನಾಧಿಕಾರಿ ದುಗ್ಗೇಗೌಡ, ಉಪಸ್ಥಿತರಿದ್ದು ಈ ತನಕ ನಡೆದಿರುವ ಸಿದ್ಧತೆಗಳ ಸ್ಥೂಲ ವಿವರ ಗಳನ್ನು ನೀಡಿ ಈ ತನಕ ನಾಡ ಹಬ್ಬವಾಗಿ ಆಚರಿಸಲ್ಪಡುತ್ತಿದ್ದ ಪರ್ಯಾಯೋತ್ಸವಕ್ಕೆ ಪೇಜಾವರ ಶ್ರೀಗಳ ರಾಷ್ಟ್ರಮಾನ್ಯ ವ್ಯಕ್ತಿತ್ವದಿಂದಾಗಿ ರಾಷ್ಟ್ರೀಯ ಉತ್ಸವ ದ ಆಯಾಮ ದೊರೆಯುತ್ತಿರುವುದಾಗಿ ತಿಳಿಸಿದರು. ಆದ್ದರಿಂದ ಉಡುಪಿಯ ನಾಗರಿಕರು, ಜನಪ್ರತಿನಿಧಿಗಳು, ಶ್ರಿಕೃಷ್ಣನ ಭಕ್ತರು, ಪೇಜಾವರ ಶ್ರೀಗಳ ಅಭಿಮಾನಿಗಳು ಉಳಿದಿರುವ ಕಾರ್ಯಗಳಲ್ಲಿ ಪೂರ್ಣ ಸಹಕಾರ ನೀಡಬೇಕೆಂದೂ, ವಿಶೇಷವಾಗಿ ಉಡುಪಿ ನಗರ ವ್ಯಾಪ್ತಿಯಿಂದ ದೊಡ್ಡ ಮಟ್ಟದಲ್ಲಿ ಹೊರೆಕಾಣಿಕೆ ಸಂಗ್ರಹಿಸಿ ಸಮರ್ಪಿಸಲು ಸಹಯೋಗನೀಡಬೇಕು, ಪರ್ಯಾಯದ ಸಂದರ್ಭದಲ್ಲಿ ಉಡುಪಿನಗರದ ಅಂಗಡಿ, ಮನೆ ಗಳನ್ನು ಸ್ವಯಂ ಪ್ರೇರಣೆಯಿಂದ ದೀಪಾಲಂಕಾರದಿಂದ, ಹೂವಿನ ಅಲಂಕಾರದಿಂದ ಸುಂದರ ಗೊಳಿಸಲು, ನಗರದ ಸ್ವಚ್ಛತೆ ಯನ್ನು ಕಾಪಾಡಲು ದೇಶಾದ್ಯಂತದಿಂದ ಆಗಮಿಸುವ ಗಣ್ಯರು ಭಕ್ತರನ್ನು ಅತ್ಯಂತ ಸೌಜನ್ಯದಿಂದ ಎದುರುಗೊಂಡು, ಸಾಧ್ಯವಿರುವ ಮನೆ, ವಸತಿ ಸಮುಚ್ಚಯಗಳಲ್ಲಿ ಆತಿಥ್ಯ ಒದಗಿಸಲು, ಉತ್ಸವದಲ್ಲಿ ಸ್ವಯಂಸೇವಕರಾಗಿ ಸಹಕರಿಸಲು, ಪ್ರತಿನಿತ್ಯ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸುವುದೂ ಸೇರಿದಂತೆ ಉತ್ಸವದ ಯಶಸ್ಸಿಗೆ ಎಲ್ಲ ರೀತಿಯ ನೆರವು ನೀಡುವಂತೆ ವಿನಂತಿಸಿದರು.
ಹೊರೆಕಾಣಿಕೆ ಸಮರ್ಪಣೆಗೆ ಸಂಬಂಧಿಸಿ ಎಲ್ಲ ವಾರ್ಡ್ ಗಳ ಕೌನ್ಸಿಲರ್ ಗಳು, ಗ್ರಾ.ಪಂ ಅಧ್ಯಕ್ಷ ರುಗಳನ್ನು ಸದಸ್ಯರಾಗಿಟ್ಟುಕೊಂಡು, ಶಾಸಕ ಪ್ರಮೋದ್ ಮಧ್ವರಾಜ್ ಅವರ ನೇತೃತ್ವದಲ್ಲಿ ಯಸ್ವಿಯಾಗಿ ನಡೆಸಬಹುದೆಂಬ ಅಭಿಪ್ರಾಯ ವ್ಯಕ್ತವಾಯಿತು. ಅಲ್ಲಲ್ಲಿ  ತಾತ್ಕಾಲಿಕ ಶೌಚಾಲಯಗಳನ್ನು ಕುಡಿಯುವ ನೀರಿನ ವ್ಯವಸ್ಥೆ, ಮಹಿಳೆಯರು ಮಕ್ಕಳು ಹಿರಿಯ ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಜಯಶ್ರೀ ಕೃಷ್ಣರಾಜ್ ಸೂಚಿಸಿದರು.
ಗಣ್ಯರುಗಳಾದ ಅಮೃತ್ ಶೆಣೈ, ರಾಘವೇಂದ್ರಕಿಣಿ, ಪ್ರಸಾದ್ ರಾಜ್  ಕಾಂಚನ್, ಚೇಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೃಷ್ಣರಾವ್ ಕೊಡಂಚ, ಜನಾರ್ಧನ ಭಂಡಾರ್ ಕಾರ್, ಪ್ರಕಾಶ್ ಅಂದ್ರಾದೆ, ತೆಂಕನಿಡಿಯೂರು ಗ್ರಾ.ಪಂ. ಅಧ್ಯಕ್ಷ ಜಯಕುಮಾರ್, ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಕೊಡವೂರು ಸಾಯಿಮಂದಿರದ ದಿವಾಕರ್ ಶೆಟ್ಟಿ, ಭಜನಾ ಒಕ್ಕೂಟದ ಪ್ರ.ಕಾರ್ಯದರ್ಶಿ ಶಿವಕುಮಾರ್, ಬಸ್ ಮಾಲಕರ ಸಂಘದ ಅಧ್ಯಕ್ಷ ಸುರೇಶ್ ನಾಯಕ್, ಬ್ರಾಹ್ಮಣ ಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯ ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು. ವಾಸುದೇವ ಭಟ್ ಪ್ರಸ್ತಾವನೆ ಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು, ರಾಮಚಂದ್ರ ಉಪಾಧ್ಯಾಯ, ಶೃಂಗೇಶ್ವರ್ ಸಹಕರಿಸಿದರು, ಅನೇಕ ನಗರ ಸಭಾ ಸದಸ್ಯರು ಪೂರ್ಣ ಸಹಕಾರದ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭಾಧ್ಯಕ್ಷ ಯುವರಾಜ್, ಶಾಸಕರು ಮತ್ತು ಉಸ್ತುವಾರಿ ಸಚಿವರ ಮಾರ್ಗ ದರ್ಶನದಲ್ಲಿ, ಜಿಲ್ಲಾಡಳಿತದ ಸಹಯೋಗದಲ್ಲಿ ಉಡುಪಿ ನಗರವನ್ನು ಎಲ್ಲರೀತಿಯಿಂದಲೂ ಸಜ್ಜುಗೊಳಿಸಲಾಗುವುದು ಮತ್ತು ನಗರಸಭೆಯ ಪೂರ್ಣ ಸಹಕಾರವಿದೆ ಎಂದರು...
"ಪರ್ಯಾಯ ದ ಸಂದರ್ಭದಲ್ಲಿ ಪೇಜಾವರ ಶ್ರೀಗಳ ಸಾಧನೆಯ ಹಿನ್ನೆಲೆಯಲ್ಲಿ ಉಡುಪಿ ನಗರದ ಪ್ರಮುಖ ರಸ್ತೆ ಯೊಂದಕ್ಕೆ ಶ್ರೀಗಳ ಹೆಸರಿಟ್ಟು ಗೌರವ ಸಲ್ಲಿಸಬೇಕೆಂದು ನಗರಸಭೆಗೆ ರತ್ನಕುಮಾರ್ ಮಂಡಿಸಿದ ಪ್ರಸ್ತಾವನೆಯನ್ನು ಸಭೆಯಲ್ಲಿದ್ದ ಎಲ್ಲರೂ ಚಪ್ಪಾಳೆಯ ಮೂಲಕ ಅನುಮೋದಿಸಿದರು. ಇದನ್ನು ನಗರ ಸಭೆಯ ಅಧಿವೇಶನದಲ್ಲಿಟ್ಟು ಎಲ್ಲರ ಒಪ್ಪಿಗೆ ಪಡೆದು ಅನುಷ್ಠಾನಿಸುವುದಾಗಿ ನಗರಸಭಾಧ್ಯಕ್ಷರು ತಿಳಿಸಿದರು."